ರಾವಣಾಂತರಂಗ – ೯

ರಾವಣಾಂತರಂಗ – ೯

ಸೀತಾಸ್ವಯಂವರ

ಯಜ್ಞಯಾಗಾದಿಗಳಿಂದ ಸುಪ್ರೀತರಾದ ವಿಶ್ವಾಮಿತ್ರರು ಸೀತಾಸ್ವಯಂವರ ಸುದ್ದಿ ಕೇಳಿ ಶ್ರೀರಾಮಲಕ್ಷ್ಮಣರಿಗೆ ಮದುವೆಯ ಮಂಗಳ ಕಾರ್ಯವನ್ನು ನೆರವೇರಿಸಲು ನಿಶ್ಚಯಿಸಿ ಮಿಥಿಲಾನಗರಕ್ಕೆ ಪ್ರಯಾಣ ಬೆಳೆಸಿದರು. ದಾರಿಯಲ್ಲಿ ಬರುತ್ತಿರುವಾಗ ಶ್ರೀರಾಮನು ಅಹಲ್ಯೋದ್ಯಾರ ಮಾಡಿದನು “ಅಹಲ್ಯೆ! ಪೂರ್ವಕಾಲದಲ್ಲಿ ಜನಕರಾಜನ ಪುರೋಹಿತರಾದ ಶತಾನಂದ ಮುನಿಗಳ ತಂದೆಯಾದ ಗೌತಮರಿಗೆ ಅಹಲ್ಯದೇವಿಯೆಂಬ ಪತಿವ್ರತೆಯಾದ ಸುಂದರ ಪತ್ನಿಯಿದ್ದಳು. ರೂಪದಿಂದಲೂ ಲಾವಣ್ಯದಿಂದಲೂ ರತಿಗಿಂತಲೂ ಸುಂದರಿಯಾಗಿದ್ದುದರಿಂದ ಒಮ್ಮೆ ಕಾಮುಕನಾದ ಇಂದ್ರನ ಕಣ್ಣು ಬಿತ್ತು. ಹೇಗಾದರೂ ಮಾಡಿ ಅಹಲ್ಯೆಯನ್ನು ಮೋಹಿಸಿ ತನ್ನ ವಶಮಾಡಿಸಿಕೊಳ್ಳಲು ಹಲವಾರು ಸಂಚುಗಳನ್ನು ಮಾಡುತ್ತಿದ್ದನು. ಹೊಂಚು ಹಾಕಿ ಗೌತಮ ಮುನಿಯನ್ನು ಮೋಸಗೊಳಿಸುವುದಕ್ಕೆ ತಕ್ಕ ಹಂಚಿಕೆಯನ್ನು ಹೂಡಿದನು. ಗೌತಮ ಮುನಿಯು ಪ್ರತಿನಿತ್ಯ ಉಪಃಕಾಲದಲ್ಲಿ ಕೋಳಿಕೂಗುವ ಹೊತ್ತಿನಲ್ಲಿ ಗಂಗಾಸ್ನಾನಕ್ಕೆ ಹೋಗುವುದನ್ನು ತಿಳಿದು ಮಧ್ಯರಾತ್ರಿಯಲ್ಲಿ ಕೋಳಿಯಂತೆ ಆಶ್ರಮದೆಡೆಗೆ ಬಂದು ಕೂಗಿದನು. ಆಗ ಗೌತಮರು ಬೆಳಗಾಗುವ ಸೂಚನೆಯೆಂದು ದಂಡ ಕಮಂಡಲ ವಸ್ತ್ರಗಳನ್ನು ತೆಗೆದುಕೊಂಡು ಗಂಗಾನದಿಗೆ ಹೋದನು. ಅಲ್ಲಿ ನೀರು ಸ್ತಬ್ದವಾಗಿರುವುದನ್ನು ಕಂಡು ಆಶ್ಚರ್ಯಚಕಿತನಾಗಿ ‘ಇನ್ನು ಬೆಳಗಾಗಿಲ್ಲ’ ಎಂದು ಹಿಂದಿರುಗುವಷ್ಟರಲ್ಲಿ ಇಂದ್ರನು ಮುನಿವೇಷಧಾರಿಯಾಗಿ ಆಶ್ರಮವನ್ನು ಹೊಕ್ಕು ಅಹಲ್ಯೆಯೊಡನೆ ಸಮಾಗಮವನ್ನು ಹೊಂದಿ ತನ್ನ ಲೋಕಕ್ಕೆ ಮರಳಿದನು. ಕೆಲ ಹೊತ್ತಿನ ಮೇಲೆ ಬಂದ ಗೌತಮರು ಅಹಲ್ಯೆಯೊಡನೆ ಪ್ರಣಯಸಂಬಂಧಕ್ಕಾಗಿ ಹಾತೊರೆಯಲು, ಅಹಲ್ಯೆಯು ಇದೇನಿದು ಈಗ ತಾನೇ ಸುಖಿಸಿದ ನೀವು ಮತ್ತೆ ಬೆರೆಯುವುದು ಶಾಸ್ತ್ರವಿರುದ್ಧವು” ಎಂದಳು. ಸಂಶಯಪಟ್ಟ ಮುನಿಗಳು ತನ್ನ ದಿವ್ಯದೃಷ್ಟಿಯಿಂದ ನಡೆದ ಸಂಗತಿಗಳನ್ನು ತಿಳಿದು ಇಂದ್ರನಿಗೆ ಸಹಸ್ರ ಯೋನಿಗಳಾಗುವಂತೆ ಶಾಪಕೊಟ್ಟಿದ್ದಲ್ಲದೆ ಅಹಲ್ಯೆ ಕಲ್ಲಾಗುವಂತೆ ಶಾಪವಿತ್ತನು. ನಿರಪರಾಧಿಯಾದ ಅಹಲ್ಯೆಯು “ನನ್ನದೇನು ತಪ್ಪಿಲ್ಲದಿದ್ದರೂ ಕಲ್ಲಾಗುವಂತೆ ಶಪಿಸಿದಿರಿ. ನನ್ನನ್ನು ಉದ್ಧಾರ ಮಾಡಬೇಕೆಂದು ಬೇಡಿಕೊಂಡಾಗ ಗೌತಮರು “ಮುಂದೆ ಶ್ರೀಮನ್ನಾರಾಯಣನು ರಾಮನಾಗಿ ಧರೆಗೆ ಬಂದು ನನ್ನ ಶಿಲೆಯ ಮೇಲೆ ಕಾಲಿಟ್ಟಾಗ ನಿನಗೆ ಶಾಪವಿಮೋಚನೆ” ಎಂದು ಹೇಳಿ ತಪಸ್ಸಿಗೆ ಹೊರಟುಹೋದರು. ಇತ್ತ ಅಹಲ್ಯೆಯು ಕಲ್ಲಾಗಿ ಶ್ರೀರಾಮನ ದರ್ಶನ ಎಂದಿಗಾಗುವುದೊ ಎಂದು ಕಾಯುತ್ತಿದ್ದಳು. ವಿಶ್ವಾಮಿತ್ರರು “ಶ್ರೀರಾಮ, ನಿನ್ನಿಂದ ಮಹತ್ವವಾದ ಕೆಲಸವಾಗಬೇಕು ಈ ಶಿಲೆಯು ನಿನ್ನ ಪಾದ ಸ್ಪರ್ಶದಿಂದ ಪುನರ್ಜನ್ಮ ಪಡೆಯಬೇಕು. ಈ ಶಿಲೆಯ ಮೇಲೆ ಕಾಲಿಡು” ಎನ್ನಲು ರಾಮನ ಪಾದಸ್ಪರ್ಶದಿಂದ ಅಹಲ್ಯ ಪ್ರತ್ಯಕ್ಷಳಾಗಿ ಎದ್ದು ನಿಂತು ಶ್ರೀರಾಮನಿಗೆ ನಮಸ್ಕರಿಸಿದಳು. ವಿಶ್ವಾಮಿತ್ರರು ಸಂತೋಷದಿಂದ ಅಹಲ್ಯೆಯನ್ನು ಗೌತಮರಿಗೊಪ್ಪಿಸಿ ಸೀತಾ ಸ್ವಯಂವರಕ್ಕೆಂದು ರಾಮಲಕ್ಷ್ಮಣರ ಜೊತೆಗೂಡಿ ಮಿಥಿಲಾನಗರ ಪ್ರವೇಶಿಸಿದರು. ಸೀತಾ ಸ್ವಯಂವರಕ್ಕೆ ಭರತ ಖಂಡದ ನಾನಾ ದೇಶದ ರಾಜರುಗಳು ಬಂದಿದ್ದರು. ಅದರಂತೆ ಸೀತಾ ಸ್ವಯಂವರ ನೋಡಲು ಮುನಿ ಪುಂಗವರು ಋಷಿಗಳು ನೆರೆದಿದ್ದರು. ಇಂದ್ರನ ಅಮರಾವತಿಯೇ ಧರೆಗಿಳಿದಂತೆ ಸ್ವಯಂವರ ಮಂಟಪ ಶೋಭಿಸುತ್ತಿತ್ತು. ನಡುವಿದ್ದ ರತ್ನ ಖಚಿತ ಸಿಂಹಾಸನದಲ್ಲಿ ಸೂರ್ಯನಂತೆ ಕಂಗೊಳಿಸುತ್ತಿದ್ದ ಜನಕರಾಜನು ರಾಜರುಗಳನ್ನುದ್ದೇಶಿಸಿ “ನಮ್ಮ ಸೀತಾದೇವಿಯನ್ನು ವರಿಸುವುದಾದರೆ ಈಶ್ವರನ ಉಗ್ರವಾದ ಬಿಲ್ಲನ್ನು ಬಾಗಿಸಿ ಬಾಣ ಹೊಡೆಯಬೇಕು ಹಾಗಿದ್ದರೆ ಸೀತೆ ಅವರ ಪತ್ನಿಯಾಗುವಳು” ಎಂದು ಹೇಳಿದನು. ವಿಶ್ವಾಮಿತ್ರರು ರಾಮಲಕ್ಷ್ಮಣರೊಡನೆ ಮಂಟಪಕ್ಕೆ ಬಂದು ಕುಳಿತರು. ರಾಮಲಕ್ಷ್ಮಣರ ಸುಂದರ ರೂಪಕ್ಕೆ ದಿವ್ಯತೇಜಸ್ಸಿಗೆ ಎಲ್ಲರೂ ಬೆರಗಾದರು. ಸೀತಾಮಾತೆಯು ಕರದಲ್ಲಿ ಹೂಮಾಲೆ ಹಿಡಿದು ಸಭೆಗೆ ಬಂದು ನಿಂತಳು. ಅವಳ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಲದು, ಸಹಸ್ರನಾಲಿಗೆಯುಳ್ಳ ಆದಿಶೇಷನಿಗೂ ಶಕ್ಯವಾಗಲಾರದು ಜನಕರಾಜನು ಈಶ್ವರನ ವರಪ್ರಸಾದವಾದ ಧನಸ್ಸನ್ನು ಹತ್ತುಸಾವಿರ ಭಟ್ಟರಿಂದ ತರಿಸಿ ಮಂಟಪದಲ್ಲಿ ಇರಿಸಿದನು. “ಈ ಧನಸ್ಸಿನಲ್ಲಿ ಯಾರು ಬಾಣ ಸಂಧಾನ ಮಾಡುವರೋ ಅವರಿಗೆ ಸೀತೆಯನ್ನು ಕೊಟ್ಟು ವಿವಾಹವನ್ನು ಮಾಡುತ್ತೇನೆ” ಎಂದು ಸಾರಿದನು. ಧನಸ್ಸನ್ನು ನೋಡಿಯೇ ರಾಜಕುಮಾರರು ಹಿಮೆಟ್ಟಿದರು. ಸಹಸ್ರಬಾಹುವಾದ ಬಾಣಾಸುರನು ಎತ್ತಲಿಕ್ಕೆ ಪ್ರಯತ್ನ ಪಟ್ಟು ಸೋತನು. ಆಗ್ರಜಾ ನೀವು ಸಹ ಸ್ವಯಂವರಕ್ಕೆ ಹೋಗಿದ್ದರೆಂದು ನಿಮ್ಮ ಇಪ್ಪತ್ತು ತೋಳುಗಳಿಂದಲೂ ಎತ್ತಲಿಕ್ಕಾಗದೆ ಮುಗ್ಗರಿಸಿ ಬಿದ್ದರೆಂದು ಕೇಳಿದೆ. ನಿಜವೇ?

“ಸಾಕು ಮಾಡು ಮುಂದಕ್ಕೆ ಹೇಳು ಆ ನಿನ್ನ ರಾಮನ ಪುರಾಣ ಪುಣ್ಯ ಕಥೆಯನ್ನು”

ವಿಶ್ವಾಮಿತ್ರರ ಆಣತಿಯಂತೆ ಶ್ರೀರಾಮರು ಎದ್ದು ನಿಂತು ಮುನಿಗಳ ಕಾಲಿಗೆರಗಿ ಧನಸ್ಸಿನ ಸಮೀಪ ಬಂದು ಹರನನ್ನು ಧ್ಯಾನಿಸಿ ಬಿಲ್ಲನ್ನು ಮಣಿಸಿ ಬಾಣ ಸಂಧಾನವನ್ನು ಮಾಡುವಾಗ ಬಿಲ್ಲು ಲಟಲಟನೆ ಮುರಿದು ಎರಡು ತುಂಡಾಯಿತು. ಎಲ್ಲರೂ ದಿಗ್ಮೂಢರಾಗಿ ನಿಂತರು. ಸಭಾಸದರು ಆನಂದದಿಂದ ಚಪ್ಪಾಳೆ ತಟ್ಟಿದರು. ಜನಕರಾಜನು ಸಂತೋಷ ಸಾಗರದಲ್ಲಿ ಮುಳುಗಿದನು. ಸೀತಾಮಾತೆಯು “ಈತನೇ ನನ್ನ ಸ್ವಾಮಿ, ನನ್ನ ದೈವ ಲಕ್ಷ್ಮೀಕಾಂತನೆಂದು ಹತ್ತಿರ ಬಂದು ಶ್ರೀರಾಮರ ಕೊರಳಿಗೆ ಹೂಮಾಲೆಯನ್ನು ಹಾಕಿದಳು. ಜನಕರಾಜನು ಆಯೋಧ್ಯೆಗೆ ಸೇವಕರನ್ನು ಕಳಿಸಿ, ದಶರಥ ಮಹಾರಾಜನಿಗೆ ಸುದ್ದಿ ಮುಟ್ಟಿಸಿ, ಕುಟುಂಬದವರೊಂದಿಗೆ ವಿವಾಹ ಮಹೋತ್ಸವಕ್ಕೆ ಬರಬೇಕೆಂದು ಆಮಂತ್ರಣ ನೀಡಿದನು. ದಶರಥನು ಆಶ್ಚರ್ಯಚಕಿತನಾಗಿ ಮಕ್ಕಳ ಪರಾಕ್ರಮಕ್ಕೆ ಬೆರಗಾಗಿ ಸಂತೋಷದಿಂದ ಪರಿವಾರ ಸಮೇತನಾಗಿ ಮಿಥಿಲಾನಗರಕ್ಕೆ ಬಂದನು. ಒಂದು ಶುಭದಿನ ಶ್ರೀರಾಮನಿಗೆ ಸೀತೆ, ಲಕ್ಷ್ಮಣನಿಗೆ ಊರ್ಮಿಳೆ ಸಹೋದರ ಕುಶಧ್ವಜನ ಮಕ್ಕಳಾದ ಮಾಂಡವಿ ಶ್ರುತಕೀರ್ತಿಯರನ್ನು ಭರತ ಶತ್ರುಘ್ನರಿಗೆ ಕೊಟ್ಟು ವಿವಾಹ ಮಾಡಿದನು. ದಶರಥನು ತನ್ನ ಮಕ್ಕಳು ಸೊಸೆಯರೊಂದಿಗೆ ಸಂಭ್ರಮದಿಂದ ಅಯೋಧ್ಯೆಗೆ ಮರಳಿ ಬಂದನು.

ದಾರಿಯಲ್ಲಿ ಬರುವಾಗ ಕಠೋರ ಕುಠಾರಧಾರಿ, ಕ್ಷತ್ರಿಯರ ವೈರಿ ಪರಶುರಾಮನು ಎದುರಿಗೆ ಬಂದನು. ಪರಶುರಾಮನನ್ನು ಕಂಡು ದಶರಥನು ಇನ್ನು ತನ್ನ ವಂಶವೇ ನಿರ್ನಾಮವಾಯಿತೆಂದು ಗುಂಡಿಗೆ ನಡುಗಿ ಎಚ್ಚರದಪ್ಪಿಬಿದ್ದನು. “ದಶರಥನೇ ನಾನು ಯುದ್ಧಕ್ಕೆ ಬಂದಾಗಲೆಲ್ಲಾ ಹೆದರಿ ಸೀರೆಯುಟ್ಟು ಹೆಂಗಸರ ಗುಂಪಿನಲ್ಲಿ ತಲೆ ಮರೆಸಿಕೊಳ್ಳುತ್ತಿದ್ದೆ. ಈಗ ಸಿಕ್ಕಿಬಿದ್ದೆ. ತೋರಿಸುತ್ತೇನೆ. ನನ್ನ ಕೊಡಲಿಯ ರುಚಿಯನ್ನು ಎಂದು ನುಡಿಯಲು ರಘುರಾಮನು ಮುಂದೆ ಬಂದು ‘ಬ್ರಾಹ್ಮಣನಾಗಿ ನಿರಪರಾಧಿಗಳಾದ ಕ್ಷತ್ರಿಯರ ತಲೆಕಡಿಯುವುದೇ ನಿನ್ನ ಧರ್ಮವೆಂದು ತಿಳಿದಿರುವೆಯಾ ಬಾ, ನನ್ನೊಂದಿಗೆ ತೋರಿಸು ನಿನ್ನ ಶಸ್ತ್ರದ ನೈ‌ಋಣ್ಯತೆಯನ್ನು’ ಎಂದಾಗ ಇಬ್ಬರೂ ಎದುರೆದುರಾಗಿ ಧನಸ್ಸಿಗೆ ಬಾಣವೇರಿಸಿದರು. “ಶ್ರೀರಾಮನು ಪರಶುರಾಮನ ಪರಶುವನ್ನು ಗಗನಕ್ಕೆ ಹಾರಿಸಿದನು. ಬರಿಗೈಯಾದ ಪರಶುರಾಮನು ತನ್ನ ಅವತಾರವು ಇಂದಿಗೆ ಮುಗಿಯಿತು. ಇನ್ನು ಶ್ರೀರಾಮನದೇ ಕಾಲವೆಂದು ತಿಳಿದು ತನ್ನ ದಿವ್ಯಾಸ್ತ್ರಗಳನ್ನು ರಘುರಾಮನಿಗೊಪ್ಪಿಸಿ ಆಶೀರ್ವದಿಸಿ ತಪೋವನಕ್ಕೆ ತೆರಳಿದನು. ದಶರಥನಿಗಾದರೋ ತನ್ನ ಜನ್ಮಕ್ಕಂಟಿದ ಕುತ್ತು ಪಾರಾಯಿತೆಂದು ನಿರಾಳವಾಗಿ ಉಸಿರಾಡಿದನು. ಅಯೋಧ್ಯೆಯಲ್ಲಿ ಅಂದು ಸಂಭ್ರಮದಿಂದ ಮಧುಮಕ್ಕಳಿಗೆ ಮೆರವಣಿಗೆ, ನಗರದಲ್ಲಿ ಉತ್ಸವಗಳು ವೈಭವದಿಂದ ನಡೆದವು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾಕೆ?
Next post ನಾನೊಬ್ಬನೇ ನಿನ್ನ ನೆರವ ಪಡೆದಿದ್ದಾಗ

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

cheap jordans|wholesale air max|wholesale jordans|wholesale jewelry|wholesale jerseys